ಅನುಕರಣೆ 2

ಶತ್ರು ಆಕ್ರಮಣದಿಂದ ನಾಶವಾಗದಂತೆ ಕಾಪಾಡಲು ಪ್ರಾಣಿಗಳಿಗೆ ಪ್ರಕೃತಿ ಅಳವಡಿಸಿರುವ ರಕ್ಷಣಾತಂತ್ರ (ಮಿಮಿಕ್ರಿ). ಪ್ರಾಸಂಗಿಕವಾಗಿ ಆಹಾರ ಸಂಪಾದನೆಗಾಗಿ ಬೇಟೆಯಾಡುವ ಪ್ರಾಣಿಗಳಿಗೂ ಇದರಿಂದ ಅನುಕೂಲವುಂಟು. ಆಹಾರ ಸಂಪಾದನೆ, ಆತ್ಮಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಎಂಬ ಮೂರು ಮುಖ್ಯ ಉದ್ದೇಶಗಳ ಪೂರೈಕೆಗಾಗಿ ಪ್ರಾಣಿಜೀವನದಲ್ಲಿ ನಿರಂತರ ಹೋರಾಟ ನಡೆದೇ ಇದೆ. ಜೀವನದ ಈ ಹೋರಾಟದಲ್ಲಿ ಪ್ರಾಣಿಗಳು ಅಳಿಯದೆ ಉಳಿಯಬೇಕಾದರೆ ಅವು ತಮ್ಮ ದೇಹರಚನೆ, ಜೀವನಕ್ರಮ ಮತ್ತು ರೀತಿನೀತಿಗಳನ್ನು ಬದಲಾಯಿಸುವ ಪರಿಸ್ಥಿತಿಗೆ ಸರಿಯಾಗಿ ಹೊಂದಿಸಿಕೊಳ್ಳಬೇಕು. ಯಾವ ಪ್ರಾಣಿಗೆ ಈ ಬಗೆಯ ಶಕ್ತಿ ಇರುವುದಿಲ್ಲವೋ ಅದು ಹೋರಾಟದಲ್ಲಿ ಅಳಿಯುವುದಲ್ಲದೆ ಅದರ ವಂಶವೇ ನಾಶವಾಗುವ ಸಂಭವವೂ ಇರುತ್ತದೆ. ಇದು ಡಾರ್ವಿನ್ನನ ವಿಕಾಸವಾದದ ತತ್ತ್ವಗಳ ಸಾರಾಂಶಗಳಲ್ಲಿ ಒಂದು. ಅಳಿವು-ಉಳಿವಿನ ಈ ಸಮರದಲ್ಲಿ ಯಶಸ್ವಿಯಾಗಿ ಹೊಂದಾಣಿಕೆಯಿಂದ ಉಳಿದು ಬಾಳಲು ಪ್ರಾಣಿಗಳಲ್ಲಿ ಮತ್ತು ಅವುಗಳ ಜೀವನದಲ್ಲಿ ಕ್ರಮಬದ್ಧವಾದ ಬದಲಾವಣೆಗಳು ನಿರಂತರವೂ ನಡೆಯುತ್ತಲೇ ಇರುತ್ತವೆ.

ಪ್ರಾಣಿಗಳು ತಮ್ಮ ಆಕೃತಿ (ಸ್ವರೂಪ), ಬಣ್ಣ ಅಥವಾ ವರ್ತನೆಯಿಂದ ಇತರ ಪ್ರಾಣಿಗಳನ್ನಾಗಲಿ ಸಸ್ಯಭಾಗಗಳನ್ನಾಗಲಿ ನಿರ್ಜೀವವಸ್ತುಗಳನ್ನಾಗಲಿ ಅನುಕರಿಸುವ ಕಾರ್ಯಕ್ಕೆ ಅನುಕರಣೆ ಎಂದು ಹೆಸರು. ಈ ಅನುಕರಣೆಯನ್ನು ಪ್ರದರ್ಶಿಸುವ ಪ್ರಾಣಿಯೇ ಅನುಕರಣಜೀವಿ (ಮಿಮಿಕ್, ಮಿಮೆಟಿಕ್ ಫಾರ್ಮ್) ಇದು ಅನುಕರಿಸುವ ವಸ್ತು ಅಥವಾ ಪ್ರಾಣಿ ಅನುಕರಣಮಾದರಿ.
ಕೆಲವು ದುರ್ಬಲಪ್ರಾಣಿಗಳಿಗೆ ತಮ್ಮನ್ನು ಆಹಾರವಾಗಿ ಹಿಡಿದು ತಿನ್ನುವ ಪ್ರಬಲ ಪ್ರಾಣಿಗಳ ಭಯವಿರುವುದರಿಂದ ಅವು ತಮ್ಮ ಶತ್ರುಗಳ ದೃಷ್ಟಿಯಿಂದ ಮರೆಮಾಚಿಕೊಳ್ಳಲು ನಿರ್ಜೀವವಸ್ತುಗಳನ್ನು ಅಥವಾ ಸಸ್ಯಗಳನ್ನು ಅನುಕರಿಸಬಹುದು. ಕೆಲವು ಮಾಂಸಾಹಾರಿ ಪ್ರಾಣಿಗಳು ಆಹಾರಕ್ಕಾಗಿ ಇತರ ಪ್ರಾಣಿಗಳನ್ನು ಮೋಸಗೊಳಿಸಿ ಬೇಟೆಯಾಡಲು ಅದೇ ರೀತಿಯಲ್ಲಿ ಮರೆಮಾಚಿಕೊಳ್ಳುವುದೂ ಉಂಟು. ವಿಷೋತ್ಪಾದನೆಯಿಂದ, ದುರ್ನಾತವನ್ನು ಸೂಸುವುದರಿಂದ ಅಥವಾ ಎಚ್ಚರಿಕೆಯ ಕೃತಕಸಂಕೇತಗಳಿಂದ ಶತ್ರುಗಳನ್ನು ದೂರವಿಡಬಲ್ಲವು. ಒಳ್ಳೆಯ ಭಕ್ಷ್ಯವೆನಿಸಿದ ಕೆಲವು ಪ್ರಾಣಿಗಳು ರುಚಿಯಲ್ಲದ ಪ್ರಾಣಿಗಳನ್ನು ಅನುಕರಿಸುವುದರಿಂದ ಶತ್ರುಗಳನ್ನು ಮೋಸಗೊಳಿಸಬಲ್ಲವು. ಹೀಗೆ ತಮ್ಮನ್ನು ಶತ್ರುಗಳಿಂದ ರಕ್ಷಿಸಿಕೊಳ್ಳಲು ಬೇರೆ ಬೇರೆ ಸಂದರ್ಭಗಳಲ್ಲಿ ಪ್ರಾಣಿಗಳು ವಿಧವಿಧವಾದ ಅನುಕರಣತಂತ್ರಗಳನ್ನು ಅನುಸರಿಸುತ್ತವೆ.

ಉದ್ದೇಶದ ಆಧಾರದ ಮೇಲೆ ಮುಖ್ಯವಾಗಿ ಎರಡುಬಗೆಯ ಅನುಕರಣೆಗಳನ್ನು ವಿವರಿಸಬಹುದು. ಒಂದು ರಕ್ಷಣೆಯ ಅನುಕರಣೆ, ಮತ್ತೊಂದು ಆಕ್ರಮಣಕಾರೀ ಅನುಕರಣೆ. ರಕ್ಷಣೆಯ ಅನುಕರಣೆಯನ್ನು ಮರೆಮಾಚಿಕೊಳ್ಳುವ ಅನುಕರಣೆ ಮತ್ತು ಎಚ್ಚರಿಸುವ ಅನುಕರಣೆ ಎಂದು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಹೀಗೆಯೇ ಆಕ್ರಮಣಕಾರೀ ಅನುಕರಣೆಯನ್ನು ಮರೆಮಾಚಿಕೊಳ್ಳುವ ಮತ್ತು ಮರುಳುಮಾಡುವ ವಿಧಗಳನ್ನಾಗಿ ವಿಂಗಡಿಸಲಾಗಿದೆ. ಪುನಃ ಅನುಕರಣ ಜೀವಿಗಳು ತೋರಿಸುವ ಚಟುವಟಿಕೆಯನ್ನು ಆಧರಿಸಿ ಅನುಕರಣೆಯನ್ನು ಎರಡು ವಿಧವಾಗಿ ವಿವರಿಸಲಾಗಿದೆ. ಚಟುವಟಿಕೆಯೇ ಇಲ್ಲದೆ ಕೇವಲ ಆಕಾರ ಮತ್ತು ಬಣ್ಣಗಳಿಂದ ಅನುಕರಿಸುವುದು ತಟಸ್ಥ ರೀತಿಯ ಅನುಕರಣೆ; ಬುದ್ಧಿಪೂರ್ವಕವಾದದ್ದು ಸಕ್ರಿಯಾನುಕರಣೆ.

ಮರೆಮಾಚಿಕೊಳ್ಳುವ ಉದ್ದೇಶದಿಂದ ರಕ್ಷಣೆಯ ಅನುಕರಣೆಯನ್ನು ಬೆಳೆಸಿಕೊಳ್ಳುವ ಪ್ರಾಣಿಗಳ ಸಂಖ್ಯೆ ಹೆಚ್ಚು. ಈ ರೀತಿಯ ಅನುಕರಣೆಯಲ್ಲಿ ತನ್ನ ವಾತಾವರಣದಲ್ಲಿ ಮರೆಮಾಚಿಕೊಳ್ಳುವ ಬಣ್ಣವನ್ನು ಬೆಳೆಸಿಕೊಳ್ಳುವುದರ ಜೊತೆಗೆ ಅನುಕರಣಮಾದರಿಯ ಸ್ವರೂಪವನ್ನು ಅನುಸರಿಸುವುದು ಬಹಳ ಮುಖ್ಯವಾದದ್ದು. ಈ ಎರಡು ಮುಖಗಳಲ್ಲೂ ಅನುಕರಣಸಾಮಥ್ರ್ಯವನ್ನು ಸಮರಸವಾಗಿ ಪರಿಪಕ್ವವಾಗಿ ಬೆಳೆಸಿಕೊಂಡ ಪ್ರಾಣಿಗಳು ಅತ್ಯಂತ ಯಶಸ್ವಿಯಾಗಿ ಆತ್ಮರಕ್ಷಣೆ ಮಾಡಿಕೊಳ್ಳಬಲ್ಲವು. ಮರೆಮಾಚಿಕೊಳ್ಳುವ ಉದ್ದೇಶದಿಂದ ರಕ್ಷಣಾನುಕರಣೆಯನ್ನು ಬೆಳೆಸಿಕೊಂಡಿರುವ ಪ್ರಾಣಿಗಳಲ್ಲಿ ಕ್ರಿಪ್ಟೋಲಿತೋಡಸ್ ಎಂಬ ಒಂದು ಜಾತಿಯ ಏಡಿ ಒಳ್ಳೆಯ ಉದಾಹರಣೆ. ನುಣುಪಾಗಿ ಗುಂಡಾಗಿರುವ ಇದರ ಬಿಳಿಯ ಕವಚದ ದೇಹ ಸಮುದ್ರದಡದಲ್ಲಿ ಬಿದ್ದಿರುವ ಬೆಣಚುಗಲ್ಲುಗಳನ್ನು ಹೋಲುತ್ತದೆ. ಏಡಿಗಳನ್ನು ಕಲ್ಲು ಎಂದು ಭ್ರಮಿಸಿ ಇದರ ಶತ್ರುಗಳು ಬಿಟ್ಟುಬಿಡುವುವು. ಆದರೆ ಅನೇಕ ವೇಳೆ ದೊಡ್ಡ ಪ್ರಾಣಿಗಳ ತುಳಿತಕ್ಕೆ ಸಿಕ್ಕಿ ಅವು ಪುಡಿಯಾಗುವ ಸಂಭವವುಂಟು. ಈ ಏಡಿ ಬೆಳೆಸಿಕೊಂಡಿರುವ ಅನುಕರಣೆ ಅನಭಿಜ್ಞವಾದ ಅನುಕರಣೆ. ಚಲನೆಯಿಂದ ಅನುಕರಣೆಯ ಧ್ಯೇಯ ಭಂಗವಾಗುವುದರಿಂದ ಜಡತೆಯಿಂದ ಅದು ತನ್ನ ಉದ್ದೇಶವನ್ನು ಸಾಧಿಸಿಕೊಳ್ಳುತ್ತದೆ. ಮತ್ತೊಂದು ಜಾತಿಯ ಏಡಿ ಸತ್ತ ಹವಳಗಳನ್ನು ಹೋಲುತ್ತದೆ. ಅದು ಶತ್ರುಗಳಿಂದ ಮರೆಮಾಚಿಕೊಳ್ಳುವ ಅನುಕರಣೆಯಿಂದ ಎರಡು ಬಗೆಯ ಲಾಭವನ್ನು ಪಡೆಯುತ್ತದೆ. ಶತ್ರುವಿನಿಂದ ಪಾರಾಗುವುದರ ಜೊತೆಗೆ ಮೋಸಗೊಳಿಸಿ ಇತರ ಸಣ್ಣಪುಟ್ಟ ಪ್ರಾಣಿಗಳನ್ನು ಹಿಡಿದು ಆಹಾರವಾಗಿ ಬಳಸುತ್ತದೆ.

ಜಿಯೋಮೆಟ್ರಿಡೆ ಕುಟುಂಬದ ಪತಂಗಹುಳುಗಳಿಗೆ ಮರೆಮಾಚಿಕೊಳ್ಳುವ ರಕ್ಷಣಾನುಕರಣೆಯಲ್ಲಿ ತುಂಬ ನೈಪುಣ್ಯವುಂಟು. ದೇಹದ ಬಣ್ಣದಲ್ಲೂ ಚರ್ಮದ ರಚನೆಯಲ್ಲೂ ಅವು ಸಸ್ಯಭಾಗಗಳನ್ನು ಅನುಕರಿಸಬಲ್ಲವು. ಅವುಗಳ ಚರ್ಮ ಗಿಡಗಳ ನುಣುಪಾದ ತೊಗಟೆಯನ್ನು ಹೋಲುತ್ತದೆ. ಈ ಕಾರಣದಿಂದಲೇ ಅವು ಅನೇಕ ವೇಳೆ ರೆಂಬೆಗಳನ್ನೂ ಕವಲು ರೆಂಬೆಗಳನ್ನೂ ಅನುಕರಿಸಬಲ್ಲವು. ಸೆಲಿನಿಯಾ ಟೆಟ್ರಾನುಲೇರಿಯ ಎಂಬ ಪತಂಗದ ಹುಳು ಮರೆಮಾಚಿಕೊಳ್ಳಲು ಕೆಲವು ಸಾಹಸ ಕೃತ್ಯಗಳನ್ನು ಮಾಡುತ್ತದೆ. ಬರ್ಟ್ ಜಾತಿಯ ಗಿಡದ ರೆಂಬೆಯನ್ನು ತನ್ನ ಹಿಂದಿನ ಎರಡು ಹುಸಿಗಾಲುಗಳಿಂದ (ಪ್ರೊಲೆಗ್ಸ್) ಹಿಡಿದುಕೊಂಡು ರೆಂಬೆಯ ಒಂದು ಪಕ್ಕಕ್ಕೆ ಬಾಗಿ, ದೇಹವನ್ನು ಗಡಸುಮಾಡಿಕೊಂಡು ತಾನೂ ಒಂದು ರೆಂಬೆಯಂತೆಯೇ ನಟಿಸುತ್ತದೆ. ಇಂಥ ಜಡಸ್ಥಿತಿಯಲ್ಲಿ ದೇಹದ ಬಣ್ಣ ಮತ್ತು ರಚನೆಗಳಲ್ಲಿ ಗಿಡದ ಮತ್ತೊಂದು ರೆಂಬೆಯೋ ಎಂಬಂತೆ ಅನುಕರಿಸಬಲ್ಲ ಈ ಹುಳು ಅದರ ಶತ್ರುಗಳ ದೃಷ್ಟಿಗೆ ಸುಲಭವಾಗಿ ಬೀಳಲಾರದು. ದೇಹದ ಬಣ್ಣ ಮತ್ತು ಆಕಾರಗಳಲ್ಲಲ್ಲದೆ ಕೆಲವು ವರ್ತನೆಗಳಿಂದ ಸಸ್ಯದ ಇತರ ಭಾಗಗಳನ್ನೂ ಅನುಕರಿಸಬಲ್ಲ ಕೀಟಕಗಳು ಈ ಕುಟುಂಬದಲ್ಲಿವೆ. ರೆಂಬೆಯ ಕುಡಿಯ ಎಲೆ ಮೊಗ್ಗುಗಳನ್ನು ಅನುಕರಿಸುವ ಕೆಲವು ಕೀಟಕಗಳಿವೆ. ಸಸ್ಯಕಾಂಡದ ಅಥವಾ ರೆಂಬೆಯ ಕೊನೆಯ ತುದಿಮೊಗ್ಗುಗಳನ್ನು ಕೆಲವು ಅನುಕರಿಸಬಲ್ಲವು. ಇದು ಈ ವಿಷಯವನ್ನು ತಿಳಿದ ಮನುಷ್ಯನನ್ನೂ ಮೋಸಗೊಳಿಸಬಲ್ಲ ಪರಿಣಾಮಕಾರಿಯಾದ ರಕ್ಷಣಾತಂತ್ರ. ಪತಂಗಗಳು ದೇಹದ ಬಣ್ಣ ಮತ್ತು ಆಕಾರದಲ್ಲಿರುವ ಹೋಲಿಕೆಗಳಿಂದ ಸಾಧಿಸುವ ಅನುಕರಣೆ ಜಡರೀತಿಯದಾದರೂ ರೆಂಬೆಗಳು ಮತ್ತು ಅದರ ಭಾಗಗಳನ್ನು ಅನುಕರಿಸಲು ಕೆಲವು ವರ್ತನೆಗಳನ್ನು ನಡೆಸುವುದು ಅನಿವಾರ್ಯವಾಗುತ್ತದೆ. ಆದ್ದರಿಂದ ಅದನ್ನು ಬುದ್ಧಿಪೂರ್ವಕವಾದ ಸಕ್ರಿಯಾನುಕರಣೆ ಎಂದೂ ಕರೆಯಬಹುದು.
ಜಿಯೋಮೆಟ್ರಿಡೆ ಕುಟುಂಬದ ಶೈಸೂರಾ ಮ್ಯೂಕ್ರಾನಿಸ್ ಜಾತಿಯ ಪತಂಗದಲ್ಲಿ ಹುಳುವಲ್ಲದೆ ಬೆಳೆದ ಪತಂಗವೂ ಅನುಕರಣತಂತ್ರಗಳನ್ನು ಅನುಸರಿಸುತ್ತದೆ. ಹುಳು ಚರ್ಮದ ರಚನೆ ಮತ್ತು ಬಣ್ಣದಲ್ಲಿ ಒರಟಾದ ತೊಗಟೆಯನ್ನು ಹೋಲುತ್ತದೆ. ಇದು ಜಡರೀತಿಯ ಅನುಕರಣೆ. ಬೆಳೆದ ಪತಂಗ ತನ್ನ ರೆಕ್ಕೆಗಳನ್ನು ಹೊಟ್ಟೆಯ ತಳಭಾಗಕ್ಕೆ ಜೋಡಿಸಿ ತಲೆಯನ್ನು ಕೆಳಭಾಗಕ್ಕೆ ಬಾಗಿಸಿ ದೇಹವನ್ನು ಗಡಸುಮಾಡಿಕೊಳ್ಳುವುದರಿಂದ ಗಿಡದ ತೊಗಟೆಯನ್ನು ಅನುಕರಿಸಬಲ್ಲದು. ಇದು ಬುದ್ಧಿಪೂರ್ವಕವಾದ ಅನುಕರಣೆ.

ಕಪಟರೂಪಧಾರಣೆಯಲ್ಲಿ ಆರ್ಥಾಪೆರ ಉಪವರ್ಗದ ಕೀಟಗಳು ಬಹಳ ಪ್ರಸಿದ್ಧಿ ಪಡೆದಿವೆ. ಅವು ಕಡ್ಡಿಗಳನ್ನೂ ರೆಂಬೆ ಮತ್ತು ತೊಗಟೆಗಳನ್ನೂ ಅನುಕರಿಸಬಲ್ಲವು. ಈ ಉಪವರ್ಗದ ಫಾಸ್‍ಮಿಡೆ ಕುಟುಂಬಕ್ಕೆ ಸೇರಿದ ನಡೆಯುವ ಕಡ್ಡಿಕೀಟಗಳು ಒಣಗಿದ ಕಡ್ಡಿಗಳಂಥ ನೀಳವಾದ ದೇಹ ಮತ್ತು ಕೃಶವಾದ ಕಾಲುಗಳನ್ನು ಹೊಂದಿದ್ದು ಮೆಳೆಗಳನ್ನು ಅನುಕರಿಸಬಲ್ಲವು. ಕೆಲವು, ದೇಹವನ್ನು ಗಡಸುಮಾಡಿಕೊಂಡು ಕಾಲುಗಳನ್ನು ಅವಶ್ಯವಾದಂತೆ ಚಾಚಿ, ಹೆಚ್ಚು ಯಶಸ್ವಿಯಾಗಿ ಅನುಕರಣೆಯನ್ನು ಪ್ರದರ್ಶಿಸಬಲ್ಲವು. ಕೆಲವುವೇಳೆ ಹಸಿರು, ಕಂದು ಮತ್ತು ಬೂದು ಬಣ್ಣದ ಕಾಲುಗಳಿಂದ ಮೆಲ್ಲಗೆ ಸಾಗಿ ಮನುಷ್ಯರ ದೃಷ್ಟಿಗೆ ಬಿದ್ದರೂ ಚಲಿಸದೇ ನಿಂತಾಗ ಅದೃಶ್ಯವಾಗಬಲ್ಲವು. ಒಂದು ಜಾತಿಯ ಕಡ್ಡಿಯ ಕೀಟ ನಿಂತಕೂಡಲೇ ತನ್ನ ಕಾಲುಗಳನ್ನು ಹರಡಿಕೊಳ್ಳುತ್ತದೆ. ಆಗ ಅದು ಬೂಷ್ಟು ಹಿಡಿದ ಸತ್ತ ರೆಂಬೆಯ ಕಡ್ಡಿಯಂತೆ ಭಾಸವಾಗುತ್ತದೆ. ಪೊದೆಗಳ ಮೇಲೆ ಕುಳಿತಾಗ ಮೆಲ್ಲಗೆ ತೂಕಡಿಸಿಕೊಂಡು ಹೆಜ್ಜೆ ಹಾಕುವ ಅವುಗಳ ಚಲನೆಯೂ ಕಣ್ಣಿಗೆ ಬೀಳುವುದು ಅಪೂರ್ವ. ಉಷ್ಣವಲಯದಲ್ಲೂ ಮತ್ತು ಸಮಶೀತೋಷ್ಣವಲಯಗಳಲ್ಲೂ ಫಾಸ್‍ಮಿಡೆ ಕುಟುಂಬಕ್ಕೆ ಸೇರಿದ 600 ಪ್ರಭೇದಗಳಿವೆ. ಅವುಗಳಲ್ಲಿ ಬಹುಸಂಖ್ಯಾತ ಕೀಟಗಳು ರಕ್ಷಣೆಯ ಚತುರೋಪಾಯಗಳನ್ನು ಹೂಡಬಲ್ಲವು. ನಡೆಯುವ ಎಲೆ ಎಂದು ಹೆಸರುಗಳಿಸಿರುವ ಫಿಲಿಯಂ ಎಂಬುದರ ದೇಹ ಮತ್ತು ಕಾಲುಗಳು ಚಪ್ಪಟೆಯಾಗಿ ಅಗಲವಾಗಿರುತ್ತವೆ. ರೆಕ್ಕೆಯೂ ಅಗಲವಾಗಿ ಹರಡಿಕೊಂಡಿರುತ್ತದೆ. ದೇಹ, ಕಾಲು ಮತ್ತು ರೆಕ್ಕೆಗಳ ಬಣ್ಣ ಹಸಿರಾಗಿದ್ದು ಅಲ್ಲಲ್ಲಿ ಮಚ್ಚೆಗಳನ್ನು ಹೋಲುವ ಗುರುತುಗಳಿರುತ್ತವೆ. ಈ ಎಲ್ಲ ಗುಣಗಳಿಂದ ಅದು ತನ್ನ ಹೆಸರಿಗೆ ಅನ್ವರ್ಥವಾಗಿದೆ. ಇದೇ ಕುಟುಂಬದಲ್ಲಿ ಕೆಲವು ಹಸಿರು ಬಣ್ಣವಾಗಿದ್ದು ಎಲೆಗಳ ಮಧ್ಯೆ ಮರೆಮಾಚಿಕೊಳ್ಳಬಲ್ಲವು; ಮತ್ತೆ ಕೆಲವು ಅಗಲವಾದ ಉಬ್ಬುತಗ್ಗುಗಳಿಂದ ಕೂಡಿದ ದೇಹ, ಅದರ ಮೇಲೆ ನರಗಳ ಬಲೆಗಟ್ಟು ಛಿದ್ರವಾಗಿ ಒಡೆದ ಗುರುತುಗಳು-ಈ ಲಕ್ಷಣಗಳಿಂದ ಅವು ಹೂಗಳನ್ನು ಹೋಲುತ್ತವೆ. ಒಂದು ಜಾತಿಯ ಕೀಟ ಸತ್ತ ಒಣ ಎಲೆಯನ್ನು ಅನುಕರಿಸುತ್ತದೆ; ಇನ್ನೊಂದು ಜಾತಿ ಆರ್ಕಿಡ್ ಹೂಗಳನ್ನು ಅನುಕರಿಸುತ್ತದೆ. ಅರಳಿದ ಹೂವಿನ ಮೇಲೆ ಕುಳಿತಾಗ, ಅದರೊಡನೆ ಸಮರಸವಾಗುವುದರಿಂದ ಸುರಕ್ಷಿತವಾಗಿರಬಲ್ಲದು. ಅದರ ಅಗಲವಾಗಿರುವ ತೊಡೆಯಭಾಗ ಹೂವಿನ ದಳವನ್ನು ಹೋಲುತ್ತದೆ. ದೇಹದ ಹಿಂಭಾಗದ ಮೇಲೆ ಲಘುವಾದ ಗೆರೆಗಳಿದ್ದು ಹೂವಿನ ಮಧ್ಯಭಾಗದಂತೆ ಕಾಣುತ್ತದೆ. ಮರೆಮಾಚಿಕೊಂಡು ಹೂವಿನ ಮೇಲೆ ಕುಳಿತಾಗ ತನ್ನ ಶತ್ರುಗಳಿಂದ ಪಾರಾಗುವುದಲ್ಲದೆ, ಇತರ ಸಣ್ಣ ಕೀಟಗಳನ್ನು ಹಿಡಿದು ತಿನ್ನಲೂ ಅನುಕೂಲವಾಗುತ್ತದೆ.

ಲೆಪಿಡಾಪಿರ ಉಪವರ್ಗಕ್ಕೆ ಸೇರಿದ ಅನೇಕ ಜಾತಿಗಳಲ್ಲೂ ಅನುಕರಣೆ ಕಂಡುಬರುತ್ತದೆ. ಕೆಲವು ಹಸಿರು ಎಲೆಗಳನ್ನು ಅನುಕರಿಸುತ್ತವೆ. ಕೆಲವು ಉದುರಿದ ಒಣ ಎಲೆಗಳನ್ನು ಕೇವಲ ಛಾಯೆಯಲ್ಲಿ ಮಾತ್ರವಲ್ಲದೆ ದೇಹರಚನೆಯಲ್ಲೂ ಅನುಕರಿಸುತ್ತವೆ. ಬೊಲಿವಿಯಾ ದೇಶದ ಸಿನೊಫ್ಲೇಬಿಯಾ ಅರ್ಕಿಡೋನ ಎಂಬ ಚಿಟ್ಟೆಯಲ್ಲಿ ಅದರ ಮುಂದಿನ ಜೋಡಿ ರೆಕ್ಕೆಗಳ ಹೊರ ಅಂಚು ಕಾಂಡ ಅಥವಾ ಎಲೆಯನ್ನು ಹೋಲುತ್ತದೆ. ಭಾರತದ ಕಲ್ಲಿಮಾ ಪ್ರಾರಲೆಕ್ಟ ಎಂಬ ಚಿಟ್ಟೆಯ ಅನುಕರಣೆ ಬಹಳ ಪ್ರಸಿದ್ಧವಾಗಿದೆ. ಇದರ ರೆಕ್ಕೆಗಳು ಕಾಂಡ ಮತ್ತು ಎಲೆಯನ್ನು ಏಕಕಾಲದಲ್ಲಿ ಅನುಕರಿಸಬಲ್ಲವು. ರೆಕ್ಕೆಗಳ ಮೇಲಿನ ಮತ್ತು ಕೆಳಗಿನ ವರ್ಣವಿನ್ಯಾಸದಲ್ಲಿ ಗಮನಾರ್ಹವಾದ ವ್ಯತ್ಯಾಸವಿರುತ್ತದೆ. ರೆಕ್ಕೆಯ ಮೇಲ್ಭಾಗ ಮುಗ್ಧಗೊಳಿಸುವ ಬಣ್ಣಗಳಿಂದ ಕೂಡಿರುತ್ತದೆ. (ನೀಲಗಪ್ಪಿನ ಮೇಲೆ ಹಳದಿಗೆಂಪಿನ ಮತ್ತು ನೀಲಿಬಿಳುಪಿನ ಬರೆಗಳು ಆ ಪ್ರಭೇದದ ಗುರುತಿನ ಚಿಹ್ನೆಗಳು). ಆದರೆ ರೆಕ್ಕೆಗಳ ತಳಭಾಗ ಬಣ್ಣದಲ್ಲಿ ಒಣಗಿದ ಎಲೆಯನ್ನು ಹೋಲುತ್ತದೆ. ಕೆಂಪು ಮತ್ತು ಕಂದು ಬಣ್ಣಗಳ ಪರ್ಯಾಯವಾಗಿರುವ ಚುಕ್ಕೆಗಳು ಅದರ ಮಧ್ಯೆ ಇರುವ ಪೊರೆಗಳು (ಸ್ಕೇಲ್) ಎಲೆಯ ಮೇಲೆ ಬಿದ್ದಿರುವ ಮಂಜಿನ ಹನಿಗಳಂತೆ ಕಾಣುತ್ತವೆ. ಇದಲ್ಲದೆ ಎಲೆಯ ಮೇಲೆ ಕಾಣುವಂತೆ ನರಗಳ ಬಲೆಗಟ್ಟೂ ಬೂಷ್ಟುಹಿಡಿದ ಗುರುತುಗಳೂ ಇರುತ್ತವೆ. ಈ ಕಾರಣದಿಂದಾಗಿ ಇದು ಹಾರಾಡುವಾಗ ತನ್ನ ಮೋಹಕ ಬಣ್ಣದಿಂದ ಆಕರ್ಷಿಸುತ್ತದೆ; ಆದರೆ ಯಾವುದಾದರೂ ಪ್ರದೇಶದ ಮೇಲೆ ಕುಳಿತೊಡನೆ ತನ್ನ ರೆಕ್ಕೆಗಳನ್ನು ದೇಹದ ಮೇಲಕ್ಕೆ ಜೋಡಿಸಿ ಒಣಗಿದ ಎಲೆಯನ್ನು ಅನುಕರಿಸಿ ಆತ್ಮರಕ್ಷಣೆ ಮಾಡಿಕೊಳ್ಳುತ್ತದೆ. 

ಪ್ರಮುಖಾನುಕರಣೆಯ ತಂತ್ರಗಳು ಎಚ್ಚರಿಕೆ ನೀಡತಕ್ಕ ಮಾದರಿಗೆ ಸೇರಿವೆ. ವಿಷವನ್ನು ರಕ್ಷಣಾ ಆಯುಧವಾಗಿ ಪಡೆದಿರುವ ಪ್ರಾಣಿಗಳನ್ನೂ ತಿಂದರೆ ವಿಷವಾಗಿ ಪರಿಣಮಿಸುವ ಪ್ರಾಣಿಗಳನ್ನೂ ಅವು ಅನುಕರಿಸುತ್ತವೆ. ಸಾಮಾನ್ಯವಾಗಿ ಅನುಕರಣೀಯ ವಸ್ತು ಅಥವಾ ಪ್ರಾಣಿಗಳು ಆಕರ್ಷಣೀಯ ಬಣ್ಣಗಳನ್ನು ಹೊಂದಿರುವುದರಿಂದ ತಾವೂ ಪ್ರಕಾಶಮಾನವಾದ ಬಣ್ಣಗಳನ್ನು ಪಡೆದಿರುತ್ತವೆ. ಇಲಾಪಿಡೆ ಕುಟುಂಬಕ್ಕೆ ಸೇರಿದ ಅನೇಕ ಹಾವುಗಳು ವಿಷಪೂರಿತವಾದುವು. ಅಮೆರಿಕದ ಹವಳದ ಹಾವುಗಳೂ (ಕೋರಲ್ ಸ್ನೇಕ್ಸ್) ಇದೇ ಕುಟುಂಬಕ್ಕೆ ಸೇರಿದವು. ಆ ವಿಷದ ಹಾವುಗಳೆಲ್ಲ ಅತಿಪ್ರಕಾಶಮಾನವಾದ ಬಣ್ಣ ಹೊಂದಿರುತ್ತವೆ. ಸಾಮಾನ್ಯವಾಗಿ ಅವುಗಳ ದೇಹದ ಮೇಲೆ ಪರ್ಯಾಯವಾಗಿ ಕೆಂಪು ಮತ್ತು ಕಪ್ಪು ಬಣ್ಣದ ಪಟ್ಟೆಗಳಿರುತ್ತವೆ. ವಿಷವಿಲ್ಲದ ಹಾವುಗಳು ಹವಳದ ಹಾವುಗಳನ್ನು ಅನುಕರಿಸುತ್ತವೆ. ವಿಷದ ಹಾವಿನ ಮೇಲಿರುವ ಗುರುತನ್ನು ಅಷ್ಟು ಚೆನ್ನಾಗಿ ಹೋಲದಿದ್ದರೂ ದೂರಕ್ಕೆ ಹವಳದ ಹಾವಿನ ರೂಪವನ್ನು ತೋರಿಸಬಲ್ಲ ಈ ಹಾವುಗಳು ಆ ವಿಷದ ಹಾವುಗಳಂತೆಯೇ ತಮ್ಮ ಶತ್ರುಗಳನ್ನು ಹೆದರಿಸಬಲ್ಲವು. ಆದರೆ ವಿಷದ ಹಾವಿನ ದೋಷದಿಂದ ಮನುಷ್ಯ ಈ ವಿಷವಿಲ್ಲದ ಹಾವುಗಳನ್ನೂ ಕೊಲ್ಲಬಹುದಾದ್ದರಿಂದ ಆ ಅನುಕರಣೆ ಸ್ವಲ್ಪಮಟ್ಟಿಗೆ ಅಪಾಯಕಾರಿಯೂ ಆಗಬಲ್ಲದು. ಈ ರೀತಿಯ ಅನುಕರಣೆ ಜಡರೀತಿಯ ಮಾದರಿಗೆ ಸೇರಿದ್ದು. ವಿಷವಿಲ್ಲದ ಹಂದಿಮೂತಿಯ ಹಾವುಗಳು ಬಣ್ಣದಲ್ಲಿ ಬಹು ಪರಿಪಕ್ವವಾಗಿ ವಿಷದ ಹಾವುಗಳಂತೆ ನಟಿಸಬಲ್ಲವು. ತಮ್ಮ ತಲೆಯನ್ನು ಅಗಲಿಸಿ, ಬುಸುಗುಟ್ಟಿ ಮತ್ತೆ ಕೆಲವು ವೇಳೆ ತಲೆಯನ್ನು ನೆಲಕ್ಕೆ ಹೊಡೆದು ತಾವು ಕೂಡ ವಿಷದ ಹಾವಿನಷ್ಟೇ ಅಪಾಯಕಾರಿ ಎಂಬ ಭಾವನೆಯನ್ನು ಮೂಡಿಸಿ ಶತ್ರುಗಳಿಂದ ಪಾರಾಗಬಲ್ಲವು. ಹೆಟೆರೋಡಾನ್ ಎಂಬ ಹಾವು ಇದರಲ್ಲಿ ಪ್ರಸಿದ್ಧವಾದುದು. ಆದರೆ ವಿಷದ ಹಾವಿನ ಸ್ವಭಾವವನ್ನು ಅನುಕರಿಸುವುದರಿಂದ ಮನುಷ್ಯನ ಪ್ರಕೋಪಕ್ಕೆ ಬಲಿಯಾಗಿ ಅದು ಸಾಯುವುದೂ ಉಂಟು. ಈ ಹಾವುಗಳ ಅನುಕರಣೆಯಲ್ಲಿ ಕ್ರಿಯಾತ್ಮಕ ವರ್ತನೆಗಳಿರುವುದರಿಂದ ಇದು ಬುದ್ಧಿಪೂರ್ವಕವಾದ ಅನುಕರಣೆ.

ಎಚ್ಚರಿಕೆಯನ್ನು ನೀಡುವ ಅನುಕರಣತಂತ್ರವನ್ನು ಪ್ರದರ್ಶಿಸುವ ಕೀಟಗಳೂ ಇವೆ. ಕೂದಲಿಂದ ಆವೃತವಾದ ಆಕರ್ಷಣೀಯವಾದ ಬಣ್ಣವುಳ್ಳ ಕೆಲವು ಹೂ ಚಿಗಟಗಳು (ಪ್ಲವರ್‍ಪ್ಲೈ) ಕುಟುಕಬಲ್ಲ ಜೇನುನೋಣ ಮತ್ತು ಕಣಜಗಳನ್ನು (ವಾಸ್ಟ್) ಅನುಕರಿಸಬಲ್ಲವು. ಶತ್ರುಗಳು ಸಾಮಾನ್ಯವಾಗಿ ಕುಟುಕುವ ಕೀಟಗಳ ಗೋಜಿಗೆ ಹೋಗದಿರುವುದರಿಂದ ಹೂಚಿಗಟಗಳು ಶತ್ರುಗಳಿಂದ ಪಾರಾಗಬಲ್ಲವು. ದರೋಡೆನೊಣಕ್ಕೆ (ರಾಬರ್ ಪ್ಲೈ) ಕುಟುಕುವ ಅಂಗವಿಲ್ಲ. ಆದರೆ ಅದು ಬಣ್ಣ ಮತ್ತು ಆಕಾರದಲ್ಲಿ ಜೇನುನೊಣವನ್ನು ಅನುಕರಿಸುತ್ತದೆ. ಕೀಟಾಹಾರಿ ಬುಲ್ ಜಾತಿಯ ಕಪ್ಪೆ ಜೇನನ್ನು ನಾಲಗೆಯಿಂದ ಹಿಡಿಯಲು ಪ್ರಯತ್ನಿಸಿದಾಗ ಈ ಜೇನು ಕಟುವಾಗಿ ಕಚ್ಚುತ್ತದೆ. ಪದೇ ಪದೇ ಆದ ಆ ಅನುಭವದಿಂದ ಕಪ್ಪೆ ಜೇನಿನ ಬಣ್ಣವನ್ನು ಅದರ ಕಡಿತದೊಡನೆ ಸಮೀಕರಿಸಿಕೊಳ್ಳುತ್ತದೆ. ಇನ್ನು ಮುಂದೆ ಅದು ಆ ಜೇನಿನ ಬಣ್ಣದ ಯಾವ ಕೀಟದ ಗೋಜಿಗೂ ಹೋಗುವುದಿಲ್ಲ. ಈ ಕಾರಣದಿಂದಲೇ ದರೋಡೆನೊಣ ತನ್ನ ಈ ಅನುಕರಣಶಕ್ತಿಯಿಂದ ರಕ್ಷಣೆ ಪಡೆಯುತ್ತದೆ.

ಕೆಲವು ಜಾತಿಯ ಚಿಟ್ಟೆಗಳು ತಿನ್ನಲು ರುಚಿಯಾಗಿರುವುದಿಲ್ಲ. ಸಾಮಾನ್ಯವಾಗಿ ಅವು ಪ್ರಕಾಶಮಾನವಾದ ಬಣ್ಣಗಳಿಂದ ಕೂಡಿರುತ್ತವೆ. ಶತ್ರುಪ್ರಾಣಿಗಳು ಅಭ್ಯಾಸ ಬಲದಿಂದ ಆ ಬಣ್ಣದ ಕೀಟಗಳು ರುಚಿಯಿಲ್ಲದವೆಂದುಕೊಂಡು ಅವುಗಳ ಗೋಜಿಗೆ ಹೋಗುವುದಿಲ್ಲ. ಇಂಥ ವರ್ಣಪ್ರದರ್ಶನಕ್ಕೆ ರಕ್ಷಣಾವರ್ಣತಂತ್ರ ಎಂಬ ಹೆಸರಿದೆ. ಈ ಎಚ್ಚರಿಕೆಯ ವರ್ಣಪ್ರದರ್ಶನದಿಂದ ಆ ಕೀಟಗಳು ರಕ್ಷಣೆ ಪಡೆಯುತ್ತವೆ. ಕೆಲವು ಜಾತಿಯ ರುಚಿಯಾದ ಚಿಟ್ಟೆಗಳು ರುಚಿಯಿಲ್ಲದ ಆ ಕೀಟಗಳನ್ನು ಅನುಕರಿಸಿ ಶತ್ರುಗಳಿಂದ ಪಾರಾಗುತ್ತವೆ. ಬೆಸಿಲಾರ್ಕಿಯ ಆರ್ಕಿಪಸ್ ಎಂಬ ವೈಸರಾಯ್ ಪಂಗಡದ ಚಿಟ್ಟೆ, ಪಕ್ಷಿಗಳಿಗೆ ಬಹಳ ರುಚಿಕರವಾದ ಆಹಾರ, ಆ ಚಿಟ್ಟೆ ಅನೋಸಿಯ ಪ್ಲೆಕ್ಸಿಪಸ್ ಎಂಬ ತಿನ್ನಲಾಗದ ಮಾನಿಟರ್ ಚಿಟ್ಟೆಯನ್ನು ತೀವ್ರವಾಗಿ ಅನುಕರಿಸಿ ರಕ್ಷಣೆ ಪಡೆಯುತ್ತದೆ.

ಕೆಲವುವೇಳೆ ಹೆಣ್ಣುಚಿಟ್ಟೆ ಮಾತ್ರ ಅಬಾಧಿತಮೂರ್ತಿಯನ್ನು (ಇಮ್ಯೂನ್ ಮಾಡೆಲ್) ಅನುಕರಿಸಬಲ್ಲದು. ಅದೇ ಪ್ರಭೇದದ ಗಂಡು ಯಾವ ಬದಲಾವಣೆಯನ್ನೂ ತೋರಿಸುವುದಿಲ್ಲ. ಕೆಲವುವೇಳೆ ಅದು ವಾಸಿಸುವ ಪ್ರದೇಶದಲ್ಲಿರುವ ಬೇರೆ ಬೇರೆ ಶತ್ರುಗಳನ್ನು ಅನುಕರಿಸಲು ಬಗೆ ಬಗೆಯ ರೂಪಾಂತರಗಳನ್ನು ಹೊಂದಿರುತ್ತದೆ. ಆಫ್ರಿಕದ ಪ್ಯಾಪಿಲಿಯೊ ಮಿರೋಪ್ ಎಂಬ ಒಂದು ಪ್ರಭೇದದ ಚಿಟ್ಟೆ ಬಹಳ ರುಚಿಕರವಾದದ್ದು. ಅದೇ ದೇಶದ ಡಾನಾಯ್ಡ್ ಜಾತಿಯ ಚಿಟ್ಟೆಗಳು ರುಚಿಯಿಲ್ಲದವು. ಗಂಡು ಪ್ಯಾಪಿಲಿಯೊ ನೈಜವಾದ ರೂಪವನ್ನು ಇಟ್ಟುಕೊಂಡಿರುತ್ತದೆ; ಹೆಣ್ಣು ಪ್ಯಾಪಿಲಿಯೊಗಳು ಡಾನಾಯ್ಡ್ ಚಿಟ್ಟೆಗಳನ್ನು ಹೊರರೂಪದಲ್ಲಿ ಅಣಕಿಸುತ್ತವೆ. ಡಾನಾಯ್ಡ್ ಜಾತಿಯಲ್ಲೇ ಅನೇಕ ಪ್ರಭೇದಗಳಿವೆ. ಆಯಾ ಪ್ರದೇಶದಲ್ಲಿರುವ ಡಾನಾಯ್ಡ್ ಪ್ರಭೇದವನ್ನು ಹೆಣ್ಣು ಪ್ಯಾಪಿಲಿಯೊ ಅನುಕರಿಸುವುದರಿಂದ, ಹೆಣ್ಣು ಪ್ಯಾಪಿಲಿಯೊಗಳು ಬಹುರೂಪಾಂತರಗಳನ್ನು ತೋರಿಸುತ್ತವೆ. ಒಟ್ಟು ನಾಲ್ಕು ರೀತಿಯ ರೂಪಾಂತರ ಹೊಂದಿದ ಹೆಣ್ಣು ಪ್ಯಾಪಿಲಿಯೊ ಮಿರೋಪ್‍ಗಳು ಆಫ್ರಿಕದಲ್ಲಿ ಕಂಡುಬಂದಿವೆ. ಈ ನಾಲ್ಕು ರೀತಿಯವು ಒಂದೇ ಪ್ರದೇಶದಲ್ಲಿರಬಹುದು ಅಥವಾ ಬೇರೆ ಬೇರೆ ಪ್ರದೇಶಗಳಲ್ಲಿ ಹರಡಿರಬಹುದು. ಗಂಡು ಪ್ಯಾಪಿಲಿಯೊವಿನಂತೆ ತನ್ನ ನೈಜವಾದ ಮೂಲರೂಪವನ್ನು ಇಟ್ಟುಕೊಂಡಿರುವ ಹೆಣ್ಣು ಪ್ಯಾಪಿಲಿಯೊಗಳು ಅಬಿಸೀನಿಯದಲ್ಲಿ ಮಾತ್ರ ಇವೆಯೆಂದು ತಿಳಿದುಬಂದಿದೆ. ಕೆಲವುವೇಳೆ ಒಂದು ಉಪವರ್ಗದ ಬೇರೆ ಬೇರೆ ಪ್ರಭೇದಗಳು ಕೂಡ ಹೀಗೆ ಅನುಕರಿಸಬಲ್ಲವು. ಮಿಣುಕುಹುಳುವಿನ ಹತ್ತಿರ ಸಂಬಂಧಿಯಾದ ಲೈಸಿಡ್ ಜೀರುಂಡೆಗಳು, ರುಚಿಯಿಲ್ಲದ ಹುಳುಗಳು. ಆ ಜೀರುಂಡೆಯನ್ನು ಬೇರೆ ಜಾತಿಯ ಜೀರುಂಡೆಗಳೂ ಅಲ್ಲದೆ ತಗಣೆಗಳೂ ಕೀಟಗಳೂ ಅನುಕರಿಸಬಲ್ಲವು.

ರುಚಿಯಿಲ್ಲದ ಪ್ರಭೇದಗಳನ್ನು, ರುಚಿಕರವಾದ ಪ್ರಭೇದಗಳು ಅನುಕರಿಸುವುದನ್ನು ಬೇಟ್ಸಿಯನ್ ಅನುಕರಣೆ ಎಂದು ಕರೆಯುವರು. ಕೆಲವುವೇಳೆ ರುಚಿಯಿಲ್ಲದ ಚಿಟ್ಟೆಯನ್ನು ಮತ್ತೊಂದು ರುಚಿಯಿಲ್ಲದ ಪ್ರಾಣಿ ಅನುಕರಿಸುವುದೂ ಉಂಟು; ಅಂದರೆ ಅನುಕರಿಸಲ್ಪಡುವ ಪ್ರಾಣಿಗಳೂ ಅನುಕರಿಸುವ ಪ್ರಾಣಿಗಳೂ ಅರುಚಿಗಳಾಗಿರುತ್ತವೆ. ಆ ರೀತಿಯ ಅನುಕರಣೆಯನ್ನು ಮುಲ್ಲೇರಿಯನ್ ಅನುಕರಣೆ ಎನ್ನುವರು.

ಆಕ್ರಮಣಕಾರಿ ಅನುಕರಣೆಯನ್ನು ಮಾಂಸಾಹಾರಿಗಳಲ್ಲಿ ಕಾಣಬಹುದು. ಕೀಟಗಳನ್ನು ತಿಂದು ಬದುಕುವ ಕೆಲವುಜಾತಿ ಹಳದಿಬಣ್ಣದ ಜೇಡಗಳು ಗೋಲ್ಡನ್‍ರಾಡ್ ಮತ್ತು ಇತರ ಹೂಗಳ ಮೇಲೆ ಕುಳಿತಾಗ ಹೂವಿನ ಬಣ್ಣದೊಡನೆ ಸಮರಸವಾಗುವುದರಿಂದ ಕೀಟಗಳಿಂದ ಮರೆಯಾಗಿರುತ್ತವೆ. ಕೀಟಗಳು ಮಕರಂದಕ್ಕಾಗಿ ಹೂವಿಗೆ ಬಂದೊಡನೆ ವಂಚನೆಯಿಂದ ಅವುಗಳ ಮೇಲೆ ಎರಗುತ್ತವೆ. ಆಕ್ರಮಣಕಾರೀ ಅನುಕರಣೆಯಲ್ಲಿ ಇದು ಮರೆಮಾಚಿಕೊಳ್ಳುವ ಮಾದರಿಗೆ ಸೇರಿದೆ. ಮಾನ್ಟಿಡೆ ಕುಟುಂಬದ ಕೀಟಗಳೂ ಈ ರೀತಿಯ ಅನುಕರಣೆಯನ್ನು ತೋರಿಸುತ್ತವೆ.

ಕೆಲವುಜಾತಿ ಜೇಡಗಳು ಆರ್ಕಿಡ್ ಹೂಗಳನ್ನು ಬಣ್ಣ ಮತ್ತು ಆಕಾರದಲ್ಲಿ ಅನುಕರಿಸಿ ಹೂವಿನಂತೆ ಮೋಹಗೊಳಿಸುವ ಅಥವಾ ಪ್ರಚಾರಮಾಡುವ ಬಣ್ಣಗಳಿಂದ ಕೂಡಿದ್ದು ಕೀಟಗಳನ್ನು ಆಕರ್ಷಿಸುತ್ತವೆ; ಮಕರಂದಕ್ಕಾಗಿ ಬರುವ ಕೀಟಗಳ ಮೇಲೆ ಎರಗುತ್ತವೆ. ಇದು ಆಕ್ರಮಣಕಾರೀ ಅನುಕರಣೆಯಲ್ಲಿ ಮರುಳುಮಾಡುವ ಬಗೆಗೆ ಸೇರಿದೆ. ಆಫ್ರಿಕದ ಒಂದು ಜಾತಿ ಓತಿಕೇತ (ಹೆಂಟೆಗೊದ್ದ, ಊಸರವಳ್ಳಿ) ರಕ್ಷಣೆಯ ಬಣ್ಣವನ್ನು ಹೊಂದಿದ್ದು ಬಾಯ ಅಂಚುಗಳಲ್ಲಿ ಆಕರ್ಷಕವಾದ ಹೂವನ್ನು ಹೋಲುವ ಬಣ್ಣವನ್ನು ಹೊಂದಿರುತ್ತದೆ. ಆ ಬಣ್ಣ ಕೀಟಗಳನ್ನು ಮೋಹಗೊಳಿಸುವುದರಿಂದ ಅವು ಓತಿಯ ಬಾಯಿಗೆ ಬಂದು ಬೀಳುತ್ತವೆ.
ಆರ್ಥಾಪ್ಟೆರ ಉಪವರ್ಗದ ಮಾನ್ಟಿಡ್ ಕುಟುಂಬಕ್ಕೆ ಸೇರಿದ ಹೈಮಿನಾಪಸೆ ಕರೋನೇಟಸ್ ಎಂಬ ಪ್ರಭೇದದ ಕೀಟ ತನ್ನ ಜೀವನಚರಿತ್ರೆಯಲ್ಲಿ ಹಿಂದೆ ಹೇಳಿದ ಅನೇಕ ರೀತಿಯ ಅನುಕರಣೆಗಳನ್ನು ಪ್ರದರ್ಶಿಸುತ್ತದೆ. ಇದರ ಹುಳು ಸಾಮಾನ್ಯವಾಗಿ ಪ್ರಕಾಶಮಾನವಾದ ಎಳೆಗೆಂಪಿನಿಂದ ಕೂಡಿರುತ್ತದೆ. ಚಲಿಸದೆ ರೆಂಬೆಗಳ ಮೇಲೆ ಕುಳಿತಾಗ ತನ್ನ ದೇಹದ ಹಿಂಭಾಗವನ್ನು ಬೆನ್ನಿನಮೇಲೆ ತಿರುಗಿಸಿಟ್ಟುಕೊಂಡು ಅಗಲವಾದ ದಳಗಳನ್ನು ಹೋಲುವ ಕಾಲುಗಳನ್ನು ಚಾಚುವುದರಿಂದ ಹೂವನ್ನು ಅನುಕರಿಸಿ ಶತ್ರುಪಕ್ಷಿಗಳಿಂದ ಮರೆಮಾಚಿಕೊಳ್ಳುತ್ತದೆ. ಇದಲ್ಲದೆ ಹೂವೆಂದು ಭ್ರಮಿಸಿ ಸಣ್ಣ ಕೀಟಗಳು ಜೇನಿಗಾಗಿ ಬಂದಾಗ, ಅವುಗಳ ಮೇಲೆರಗಿ ಕಬಳಿಸುತ್ತದೆ. ರೂಪಾಂತರಪರಿರ್ತನೆಯನ್ನು ಹೊಂದಿದ ಮೇಲೆ ಹೊರಬರುವ ಎಳೆಯ ಕೀಟ ಕಪ್ಪುಚುಕ್ಕೆಗಳುಳ್ಳ ಕೆಂಪುಬಣ್ಣದಿಂದ ಕೂಡಿದ್ದು, ಸಸ್ಯಗಳ ಮೇಲೆ ವಾಸಿಸುವ ಅರುಚಿಯಾದ ಒಂದು ಜಾತಿ ತಗಣೆಯನ್ನು (ಪ್ಲಾಂಟ್‍ಬಗ್) ಅಣಕಿಸಿ ಶತ್ರುಪ್ರಾಣಿಗಳಿಂದ ಪಾರಾಗುತ್ತದೆ. ಅದು ಬೆಳೆದಂತೆ ಕೊನೆಯ ಪೊರೆ (ಮಾಲ್ಟ್) ಬಿಟ್ಟ ಅನಂತರ ದೇಹ ಮತ್ತು ಬಣ್ಣದಿಂದ ಹೂವನ್ನು ಅಣಕಿಸಿ ಆಕ್ರಮಣಕೃತ್ಯದ ಜೀವನವನ್ನು ತಾನೇ ಅನುಸರಿಸುತ್ತದೆ.

ಬುದ್ಧಿಪೂರ್ವಕವಾದ ಅನುಕರಣೆಯ ಗುಂಪಿಗೆ ಸೇರಿಸಬಹುದಾದ ಮತ್ತೊಂದು ಬಗೆಯೆಂದರೆ ಸಾವಿನ ಅಣಕ. ಅಮೆರಿಕದ ಒಪಾಸಮ್ ಎಂಬ ಒಂದು ಸಸ್ತನಿಪ್ರಾಣಿ ತನ್ನ ಮೇಲೆ ಯಾವುದಾದರೂ ಶತ್ರು ಎರಗಿದಾಗ ಸತ್ತಂತೆ ನಟಿಸಿ ಸಾವಿನ ದವಡೆಯಿಂದ ಪಾರಾಗುವುದು. ಅದನ್ನು ಒಪಾಸಮ್ ನಟನೆ ಎಂದು ನಾಣ್ಣುಡಿಯಾಗಿ ಕರೆಯುವುದುಂಟು. ಈ ನಟನೆ ಬುದ್ಧಿಪೂರ್ವಕವಾದ ಅನುಕರಣೆ ಎಂದು ಕೆಲವರ ಅಭಿಪ್ರಾಯ : ನಟನೆಯಲ್ಲ, ಅದು ಕೇವಲ ಭಯದಿಂದ ಒದಗಿದ ಮೂರ್ಛೆ ಎಂದು ಕೆಲವರ ಅಭಿಪ್ರಾಯ : ಗಡಸುದೇಹದ ದುಂಬಿಗಳು ಕೂಡ ಇಂಥ ಅನುಕರಣೆಯನ್ನು ತೋರಿಸುತ್ತವೆ. ಅವು ಕೆಳಗೆ ಬಿದ್ದಾಗ ಅಷ್ಟಾಗಿ ದೇಹಕ್ಕೆ ಗಾಯವಾಗುವುದಿಲ್ಲ. ಯಾವುದಾದರೂ ಪ್ರಾಣಿ ಅದನ್ನು ಹಿಡಿಯಲು ಹೋದಾಗ ಕೆಳಕ್ಕೆ ಬಿದ್ದು ಕಲ್ಲಿನ ಚೂರಿನಂತೆ ನಿಶ್ಚೇಷ್ಟಿತವಾಗುತ್ತವೆ. ಬೇಟೆಯ ಪ್ರಾಣಿಗಳು ಎಲೆ ಹುಲ್ಲುಗಳ ಮಧ್ಯೆ ಅವಕ್ಕಾಗಿ ಹುಡುಕಿ ವಿಫಲವಾಗಿ ಹಿಂತಿರುಗುತ್ತವೆ.
ವಾಲಸ್ ಎಂಬ ವಿಜ್ಞಾನಿ ರಕ್ಷಣೆಯ ಅನುಕರಣೆ ಪ್ರಕೃತಿಯಲ್ಲಿ ಸಂಭವಿಸಬೇಕಾದರೆ ಇರಬೇಕಾದ ಕೆಲವು ಅಂಶಗಳನ್ನು ಪಟ್ಟಿಮಾಡಿದ್ದಾನೆ. 1 ಅನುಕರಿಸುವ ಪ್ರಾಣಿಯ ಪ್ರಭೇದ ಮತ್ತು ಅನುಕರಿಸಲ್ಪಡುವ ಪ್ರಾಣಿಯ ಪ್ರಭೇದಗಳು ಒಂದೇ ಪ್ರದೇಶದಲ್ಲಿರಬೇಕು; 2 ಅನುಕರಿಸುವ ಪ್ರಾಣಿಗಳು ಯಾವಾಗಲೂ ರಕ್ಷಣೆಯಿಲ್ಲದವು; 3 ಅನುಕರಿಸುವ ಪ್ರಾಣಿಗಳು ಯಾವಾಗಲೂ ಹೆಚ್ಚು ಸಂಖ್ಯೆಯಲ್ಲಿರುತ್ತವೆ; 4 ಅನುಕರಣೆ ಕೇವಲ ಪ್ರಾಣಿಯ ಬಾಹ್ಯ ರೂಪಕ್ಕೆ ಸಂಬಂಧಪಟ್ಟಿರುತ್ತದೆಯೇ ಹೊರತು ಒಳರಚನೆಯಲ್ಲಿ ಯಾವ ಬದಲಾವಣೆಯನ್ನೂ ಉಂಟುಮಾಡುವುದಿಲ್ಲ.

ಅನುಕರಿಸುವ ಜೀವಿಗಳು ಹೇಗೆ ವಿಕಾಸಗೊಂಡವು ಎಂಬುದರ ಬಗ್ಗೆ ಅನೇಕವಾದವಿವಾದಗಳಿವೆ. ಡಾರ್ವಿನ್ ಪ್ರತಿಪಾದಿಸಿದ ನೈಸರ್ಗಿಕ ಆಯ್ಕೆಯೆ ಅದಕ್ಕೆ ಕಾರಣ ಎಂಬುದು ವೀಸ್‍ಮನ್ ಎಂಬವನ ಅಭಿಪ್ರಾಯ. ಅದರಂತೆ, ಪ್ರಾರಂಭದಲ್ಲಿ ಒಂದು ಪ್ರಭೇದದ ಪ್ರಾಣಿಗಳು ತಾವು ಅನುಕರಿಸಬೇಕಾದ ಮಾದರಿಯನ್ನು ಅಷ್ಟಾಗಿ ಹೋಲಲಾರವು. ಆದರೆ ಒಂದು ಸಂತತಿಯಲ್ಲಿ ಆ ಮಾದರಿಯನ್ನು ಆದಷ್ಟು ಹೆಚ್ಚಾಗಿ ಹೋಲುವ ಪ್ರಾಣಿಗಳು ಜೀವನ ಸಂಗ್ರಾಮದಲ್ಲಿ ಉಳಿಯುತ್ತವೆ. ಮಿಕ್ಕವು ಅಳಿಯುತ್ತವೆ. ಉಳಿದ ಪ್ರಾಣಿಗಳು ಮಾತ್ರ ತಮ್ಮ ಸಂತತಿಯನ್ನು ಮುಂದುವರಿಸುತ್ತವೆ. ಹೀಗೆ ಪ್ರತಿಯೊಂದು ಸಂತತಿಯಲ್ಲೂ ಹೆಚ್ಚು ಹೆಚ್ಚು ಹೋಲಿಕೆಯನ್ನು ತೋರಬಲ್ಲ ಪ್ರಾಣಿಗಳನ್ನು ಮಾತ್ರ ಪ್ರಕೃತಿ ಆಯ್ದು ಉಳಿಸಿ ಬೆಳೆಸುತ್ತದೆ. ಕೊನೆಯಲ್ಲಿ ಚೆನ್ನಾಗಿ ಅನುಕರಿಸಬಲ್ಲ ಪ್ರಾಣಿಜಾತಿಗಳು ವಿಕಸಿಸುತ್ತವೆ. ಈ ವಾದ ನಿಜವಾದರೆ, ಒಂದು ಮಾದರಿಯನ್ನು ಅಸ್ಪಷ್ಟವಾಗಿ ಹೋಲುವ ಅನುಕರಿಸುವ ಪ್ರಾಣಿಗಳು ಇಂದಿಗೂ ಹೇರಳವಾಗಿವೆ. ಇವು ಪ್ರಕೃತಿಯ ಆಯ್ಕೆಯ ವಾದಕ್ಕೆ ಸಮಸ್ಯೆಯನ್ನು ತಂದೊಡ್ಡುತ್ತವೆ. ಅಬಾಧಿತವಾಗಲು ರುಚಿಯಿರದ ಬೇರೆಯ ಜಾತಿಗಳನ್ನು ಅನುಕರಿಸುತ್ತ ಪ್ರಾಣಿಗಳು ವಿಕಸಿಸಿವೆ ಎನ್ನುವುದಾದರೆ. ಒಂದು ರುಚಿಯಿರದ ಪ್ರಾಣಿಯನ್ನು ಮತ್ತೊಂದು ರುಚಿಯಿರದ ಪ್ರಾಣಿ ಅಣಕಿಸುವ ಮುಲ್ಲೇರಿಯನ್ ಅನುಕರಣೆಯೂ ಅಂಥದೇ ಸಮಸ್ಯೆಯನ್ನು ಒಡ್ಡುತ್ತದೆ. ಅನುಕರಿಸಲ್ಪಡುವ ಮಾದರಿಗಳು ಹೇರಳವಾಗಿರುವ ಪ್ರದೇಶದಲ್ಲಿ ಅನುಕರಿಸಲು ಯತ್ನಿಸುವ ಪ್ರಾಣಿಗಳ ಸಂಖ್ಯೆ ಬಹಳ ವಿರಳ: ಅನುಕರಿಸಲ್ಪಡುವ ಮಾದರಿಗಳು ವಿರಳವಾಗಿರುವ ಪ್ರದೇಶದಲ್ಲಿ ಅನುಕರಿಸುವ ಪ್ರಾಣಿಗಳ ಸಂಖ್ಯೆ ಬಹಳ ಹೇರಳವಾಗಿರುತ್ತದೆ. ಇದೂ ಒಂದು ಸಮಸ್ಯೆ. ಈ ಸಮಸ್ಯೆ ಪ್ರಕೃತಿಯಲ್ಲಿ ಪ್ರಚಾರದಲ್ಲಿರುವ ಮಾರುಟ್ಟುವೆಯ(ಮ್ಯುಟೇಷನ್) ನಿಯಮ ಅನುಕರಿಸುವ ಪ್ರಾಣಿಗಳು ವಿಕಾಸಕ್ಕೆ ಕಾರಣವಿರಬಹುದೇ ಎಂಬ ವಾದಕ್ಕೆ ಅವಕಾಶವೀಯುತ್ತದೆ. ಅನುಕರಿಸುವ ಜೀವಿಗಳ ವಿಕಾಸಕ್ಕೆ ಸಂಬಂಧಪಟ್ಟ ನಿರ್ದಿಷ್ಟವಾದ ಕಾರಣ ಇದೇ ಎಂಬುದಾಗಿ ಹೇಳಲು ಅನೇಕ ಎಡರುತೊಡರುಗಳಿವೆ. ಆದರೂ ಪ್ರಕೃತಿಯ ಆಯ್ಕೆ ಅದಕ್ಕೆ ಪ್ರಮುಖ ಕಾರಣ ಎಂಬ ವಾದಕ್ಕೆ ಪುರಸ್ಕಾರವಿದೆ.

ಮನುಷ್ಯ ವಿವರಿಸಿರುವ ಪ್ರಾಣಿಯ ಅನುಕರಣೆ ಇತರ ಪ್ರಾಣಿಗಳ ದೃಷ್ಟಿಯಲ್ಲಿ ಎಷ್ಟರಮಟ್ಟಿಗೆ ಫಲಕಾರಿಯಾಗಿದೆ ಎಂಬುದು ಒಂದು ಕುತೂಹಲಕಾರಿ ಪ್ರಶ್ನೆ. ಮನುಷ್ಯನ ಕಣ್ಣಿಗೆ ಬೀಳುವ ವರ್ಣವಿನ್ಯಾಸಗಳು ಪ್ರಾಣಿಗಳ ಕಣ್ಣಿಗೆ ಅದೇ ರೀತಿಯಲ್ಲಿ ಬೀಳಲಾರವು ಎಂಬುದು ಕೆಲವರ ಅಭಿಪ್ರಾಯ. ಈ ವಿಷಯವಾಗಿ ಅನೇಕ ಪ್ರಯೋಗಗಳು ನಡೆಯುತ್ತಿವೆ. ಒಬ್ಬ ವಿಜ್ಞಾನಿ ಒಂದು ಪಂಜರದಲ್ಲಿ ಮರೆಮಾಚಿಕೊಳ್ಳುವ ಬಣ್ಣಗಳುಳ್ಳ ಕೀಟಗಳೊಡನೆ ಬೇರೆ ಬೇರೆ q ಕೀಟಗಳನ್ನೂ ಬಿಟ್ಟ. ಅದೇ ಪಂಜರದಲ್ಲಿ ಕೀಟಾಹಾರಿಪಕ್ಷಿಗಳನ್ನೂ ಓತಿಕೇತಗಳನ್ನೂ ಬಿಟ್ಟಾಗ ಅವು ಪ್ರಕಾಶಮಾನವಾದ ವರ್ಣವಿನ್ಯಾಸಗಳಿದ್ದ ಕೀಟಗಳ ಗೋಜಿಗೆ ಹೋಗದೆ ಮರೆಮಾಚಿಕೊಳ್ಳುವ ಬಣ್ಣಗಳಿದ್ದ ಕೀಟಗಳನ್ನು ಹಿಡಿದು ತಿಂದುವು. ಆಕ್ರಮಣಕಾರೀ ಪ್ರಾಣಿಗಳು ತಮ್ಮ ಆಹಾರವನ್ನು ವಾಸನೆಯಿಂದ ಆರಿಸಿಕೊಳ್ಳುತ್ತವೆಯೇ ವಿನಾ ದೃಷ್ಟಿಬಲದಿಂದಲ್ಲ ಎಂಬುದು ಆ ಪ್ರಯೋಗದ ತೀರ್ಮಾನ.

ಪ್ರಾಣಿಗಳ ದೃಷ್ಟಿಸಾಮಥ್ರ್ಯದ ಮೇಲೆ ಸಾಕಷ್ಟು ಪ್ರಯೋಗಗಳು ನಡೆಯುವವರೆಗೂ ಪ್ರಾಣಿಗಳ ಅನುಕರಣತಂತ್ರದ ನಿಜಸ್ವರೂಪ ಮತ್ತು ಪ್ರಭಾವಗಳ ಬಗ್ಗೆ ನಿರ್ದಿಷ್ಟವಾಗಿ ಹೇಳುವುದು ಸಾಹಸದ ಮಾತಾಗುತ್ತದೆ.			 
  
(ಎಚ್.ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ